ಕ್ಯಾಟಿಕಾಲ್

ಕೆಲವು ಸಸ್ಯಗಳಲ್ಲಿ ಸಂಯುಕ್ತ ರೂಪದಲ್ಲಿರುವ ಒಂದು ರಾಸಾಯನಿಕ (ಆರ್ತೊ ಡೈಹೈಡ್ರಾಕಿ ಬೆಂಜಿûೀನ್). ಇದರ ಅಣು ರಚನೆ ಹೀಗಿದೆ : 

ಚಿತ್ರ-1

ಪ್ರಥಮಬಾರಿಗೆ ಕಾಚನ್ನು (ಕ್ಯಾಟಿಚೂ) ಬಟ್ಟಿ ಇಳಿಸಿ ಇದನ್ನು ತಯಾರಿಸಲಾಯಿತು. ಆದ್ದರಿಂದಲೇ ಈ ಹೆಸರು. ಇದು ಬೀಚ್‍ಡಾಂಬರಿನಲ್ಲಿ ಸ್ವತಂತ್ರರೂಪದಲ್ಲಿ ದೊರೆಯುತ್ತದೆ. ಪೈರೊಕ್ಯಾಟಿಕಾಲ್ ಅಥವಾ ಪೈರೊಕ್ಯಾಟೆಚುಯಿಕ್ ಆಮ್ಲ- ಇದರ ಬೇರೆ ಹೆಸರುಗಳು. ಆರ್ತೊಫೀನಾಲ್ ಸಲ್ಫೋನಿಕ್ ಆಮ್ಲವನ್ನು ಕ್ಷಾರಗಳೊಡನೆ ಕರಗಿಸಿ ಇದನ್ನು ತಯಾರಿಸಬಹುದು. ಸ್ಯಾಲಿಸಿಲ್ ಆಲ್ಡಿಹೈಡ್ ಮೇಲೆ ಕ್ಷಾರೀಯ ಹೈಡ್ರೊಜನ್ ಪೆರಾಕ್ಸೈಡ್ ವರ್ತನೆಯಿಂದಲೂ ಇದರ ತಯಾರಿಕೆ ಸಾಧ್ಯ. ಉದ್ಯಮ ಮಟ್ಟದಲ್ಲಿ ಆರ್ತೊಕ್ಲೋರೊಫೀನಾಲ್ ಅಥವಾ ಆರ್ತೊಡೈಕ್ಲೋರೊಬೆಂಜಿûೀನನ್ನು ಕಾಸ್ಟಿಕ್‍ಸೋಡ ದ್ರಾವಣದೊಡನೆ ಒತ್ತಡದಲ್ಲಿ ಕಾಯಿಸಿ ತಯಾರಿಸಲಾಗುವುದು. ಈ ಕ್ರಿಯೆಗೆ ವೇಗವರ್ಧಕ ತಾಮ್ರದ ಸಲ್ಫೇಟ್. ಕ್ಯಾಟಿಕಾಲ್ ಬಣ್ಣವಿಲ್ಲದ ಘನವಸ್ತು. ಇದರ ಕರಗುವ ಬಿಂದು 105 ಡಿಗ್ರಿ ಸೆಂ. ನೀರು, ಆಲ್ಕೊಹಾಲ್ ಮತ್ತು ಈಥರುಗಳಲ್ಲಿ ಇದು ಕರಗುತ್ತದೆ.  ಫೆರಿಕ್ ಕ್ಲೋರೈಡ್ ಜೊತೆ ಹಸುರು ಬಣ್ಣವನ್ನು ಕೊಡುತ್ತದೆ. ಕ್ಷಾರಗಳೊಡನೆ ಈ ಬಣ್ಣ ಕೆಂಪಾಗುತ್ತದೆ. ಇದು ಒಳ್ಳೆಯ ಅಪಕರ್ಷಣಕಾರಿ. ಬೆಳ್ಳಿಯ ನೈಟ್ರೇಟ್ ಮತ್ತು ಬಿಸಿ ಫ್ಹೇಲಿಂಗ್ ದ್ರಾವಣಗಳನ್ನು ಅಪಕರ್ಷಿಸುತ್ತದೆ. ಥ್ಯಾಲಿಕ್ ಅನ್ಹೈಡ್ರೈಡಿನೊಡನೆ ಸಲ್ಫ್ಯೂರಿಕ್‍ಆಮ್ಲದ ಸಮ್ಮುಖದಲ್ಲಿ ಸಂಗ್ರಹಗೊಂಡ ಅಲಿಜûರಿನನ್ನು ಕೊಡುತ್ತದೆ. ಅಡ್ರೆನಲೀನ್ ಹಾರ್ಮೋನ್ ಇದರ ಒಂದು ಮುಖ್ಯ ವ್ಯುತ್ಪನ್ನ. ಇದರ ಅಣುರಚನೆ ಹೀಗಿದೆ:

ಚಿತ್ರ-2

ಛಾಯಾಚಿತ್ರಗಳನ್ನು ಸ್ಪಷ್ಟಗೊಳಿಸಲು ಕ್ಯಾಟಿಕಾಲಿನ ಉಪಯೋಗ ಉಂಟು.  
                                                               (ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ